ಬಾಟಿಕ್ ಕಲೆ
ಮೇಣ ಮತ್ತು ಬಣ್ಣ ಉಪಯೋಗಿಸಿ, ಬಟ್ಟೆಯ ಮೇಲೆ ನಾನಾ ರೀತಿಯ ಚಿತ್ರ ಮೂಡಿಸುವ ಕಲೆ. ಇದರ ಮೂಲ ಭಾರತವೆಂದೂ, ಚೀನವೆಂದೂ ವಾದವಿವಾದವಿದೆ. ಸುಮಾರು 1200 ವರ್ಷಗಳ ಹಿಂದಿನಿಂದಲೂ ಭಾರತ, ಆಗ್ನೇಯ ಏಷ್ಯ, ಆಫ್ರಿಕಗಳಲ್ಲಿ ಇದ್ದ ಈ ಕಲೆ ಸುಮಾರು 17ನೆಯ ಶತಮಾನದ ವೇಳೆಗೆ ಯೂರೊಪಿಗೆ ಹರಡಿತು. ಜಾವ ಈ ಕಲೆಗೆ ಪ್ರಸಿದ್ಧವಾದ ದೇಶ. ಅಲ್ಲಿಯ ಕಲಾ ಸಂಪ್ರದಾಯ ಉಚ್ಚಮಟ್ಟದ ಜಾವ ವಿಧಾನವೆಂದು ಹೆಸರುಗಳಿಸಿದೆ. ಅಲ್ಲಿ ಇದೊಂದು ರಾಷ್ಟ್ರೀಯ ಕಲೆಯಾಗಿ ಅಭಿವೃದ್ಧಿ ಹೊಂದಿದೆ.

ಜಾವಾ ಭಾಷೆಯಲ್ಲಿ ಬಾಟಿಕ್ ಎಂದರೆ, ಮೇಣದಿಂದ ಚಿತ್ರಿಸುವುದು ಎಂದರ್ಥ. ಬಾಟಿಕ್ ಕಲೆಗೆ ಬೇಕಾಗುವ ಅಗತ್ಯ ವಸ್ತುಗಳೆಂದರೆ ಜೇನುಮೇಣ, ಪ್ಯಾರಫಿನ್ ಮೇಣ, ರೆಸಿನ್ (ರಾಳ): ಬಣ್ಣಗಳು; ಕುಂಚಗಳು; ಬಣ್ಣ ಅದ್ದುವ ಪಾತ್ರೆಗಳು; ಬಟ್ಟೆ ಬಿಗಿದಿಡಲು ಚೌಕಟ್ಟು; ಬಟ್ಟೆ ಶುಭ್ರಕಗಳು; ಬಿಸಿನೀರು ಅಥವಾ ಪೆಟ್ರೋಲ್.

ಬಣ್ಣ ಹಾಕುವುದಕ್ಕೆ ತೊಡಗುವ ಮುನ್ನ ಬಟ್ಟೆಯನ್ನು ಮೊದಲು ಸಾಬೂನು ಅಥವಾ ಕಾಸ್ಟಿಕ್ ಸೋಡಾದ್ರಾವಣ ಸೇರಿಸಿದ ಬಿಸಿನೀರಿನಲ್ಲಿ ಒಗೆದು ಶುಭ್ರಗೊಳಿಸಿ, ಒಣಗಿಸಬೇಕು. ಅನಂತರ ಬಟ್ಟೆಯನ್ನು ಚೌಕಟ್ಟಿಗೆ ಹಾಕಿ, ಬೇಕಿರುವ ವಿನ್ಯಾಸವನ್ನು ಅದರ ಮೇಲೆ ಬರೆದುಕೊಳ್ಳಬೇಕು. ಸ್ವಲ್ಪ ರೆಸಿನ್ ಸೇರಿಸಿ ಕರಗಿಸಿದ ಜೇನುಮೇಣ ಅಥವಾ ಪ್ಯಾರಫಿನ್ ಮೇಣವನ್ನು ಬಟ್ಟೆಯ ಮೇಲೆ ಎಲ್ಲಿ ಬಣ್ಣ ಮೂಡಬೇಕಾಗಿಲ್ಲವೋ ಆ ಭಾಗಗಳಿಗೆ ಕುಂಚದ ಸಹಾಯದಿಂದ ಎಚ್ಚರಿಕೆಯಿಂದ ಹಚ್ಚಬೇಕು. ಹೀಗೆ ಮೇಣ ಹಚ್ಚುವ ಸಲಕರಣೆಗೆ ಜಾವಾದಲ್ಲಿ ಜನ್‍ಟಿಂಗ್ ಎಂಬ ಹೆಸರಿದೆ. ಮೇಣ ಆರಿ ಗಟ್ಟಿಯಾದ ಮೇಲೆ ಬಟ್ಟೆಯನ್ನು ಬೇಕಾದ ಬಣ್ಣದಲ್ಲಿ ಅದ್ದಿ, ನೆರಳಿನಲ್ಲಿ ಒಣಗಿಸಬೇಕು. ಆನಂತರ ಮೇಣವನ್ನು ತೆಗೆಯಲು ಬಟ್ಟೆಯನ್ನು ಬಿಸಿನೀರಿನಲ್ಲಿ ಅಥವಾ ಪೆಟ್ರೊಲಿನಲ್ಲಿ ನೆನೆಹಾಕಿ ಜಾಲಿಸಬೇಕು. ಒಣಗಿದ ಬಟ್ಟೆಯನ್ನು ನೀಟಾಗಿ ಇಸ್ತ್ರಿ ಮಾಡಿದರೆ ಅಲ್ಲಿಗೆ ಬಣ್ಣ ಹಾಕುವಿಕೆಯ ಕೆಲಸ ಮುಗಿದಂತೆ. ಒಂದು ಬಣ್ಣದಲ್ಲಿ ಅತ್ಯಂತ ಸರಳ ವಿನ್ಯಾಸಗಳನ್ನು ಪಡೆಯಲು ಇಷ್ಟು ಕೆಲಸ ಸಾಕು. ಆದರೆ ಅನೇಕ ಬಣ್ಣಗಳನ್ನೂ ವರ್ಣರಂಜಿತ ವಿನ್ಯಾಸಗಳನ್ನೂ ಪಡೆಯಬೇಕಾದಲ್ಲಿ ಈ ವಿಧಾನವನ್ನು ಪುನರಾವರ್ತನೆಗೊಳಿಸುತ್ತ ಹೋಗಬೇಕು. ಸಾಮಾನ್ಯ ಬಣ್ಣಗಳೆಂದರೆ ಕೆಂಪು, ಹಳದಿ ಹಾಗೂ ನೀಲಿ. ಈ ಬಣ್ಣಗಳನ್ನೇ ಹದವಾಗಿ ಮಿಶ್ರ ಮಾಡುತ್ತ ಹೋದರೆ ವರ್ಣರೋಹಿತದಲ್ಲಿ ಯಾವುದೇ ಬಣ್ಣವನ್ನು ಪಡೆಯಬಹುದು. ನೇರಬಣ್ಣದ ಬಳಕೆಯ ಬಾಟಿಕ್ ಕಲಾಕೃತಿಗಳು ಬಣ್ಣಗುಂದದಿರಲು ಬಣ್ಣದೊಡನೆ ಸೋಡಾಪುಡಿ ಮತ್ತು ಅಡುಗೆ ಉಪ್ಪನ್ನು ಕರಗಿಸಿ ಉಪಯೋಗಿಸಬೆಕು. ಕೃತಕ ಬಣ್ಣಗಳಾದ ನೆಫತಾಲ್, ಬ್ರಿಂತಾಲ್ ಮುಂತಾದವು ನೀರಿನಲ್ಲಿ ವಿಲೀನವಾಗದ ಆಜೋó ಬಣ್ಣಗಳು. ಬಣ್ಣ ಬರಲು ಮೂಲದ್ರಾವಣದಲ್ಲಿ ಮುಳುಗಿಸಿ ಅನಂತರ ದೃಢೀಕರಿಸುವ ದ್ರಾವಣದಲ್ಲಿ ಮುಳುಗಿಸಿದಾಗ ಆಯಾ ಬಣ್ಣಗಳು ಗೋಚರವಾಗುತ್ತವೆ. ಈ ಬಣ್ಣಗಳು ಬಲು ದೃಢವಾದುದರಿಂದ ಇವನ್ನು ಹತ್ತಿ, ಲೆನಿನ್, ಸೆಣಬು, ರೇಷ್ಮೆ ಹಾಗೂ ರಯಾನ್ ಬಟ್ಟೆಗಳಿಗೆ ಉಪಯೋಗಿಸಬಹುದು.

ಜಾವಾ ಬಾಟಿಕ್ ವಿಧಾನ ತುಂಬ ಕ್ಲಿಷ್ಟವಾದ ಕಲೆಗಾರಿಕೆ. ಇದಕ್ಕೆ ದೀರ್ಘ ಸಮಯ ಹಾಗೂ ತಾಳ್ಮೆ ಬೇಕಾಗುತ್ತವೆ. ಬಾಟಿಕ್ ಕಲೆಗೆ ಉಪಯೋಗಿಸುವ ವಸ್ತ್ರವನ್ನು ಶುಭ್ರಗೊಳಿಸುವ ರೀತಿಯೆಂದರೆ ಮೊದಲು ಸಾಬೂನು ಅಥವಾ ಕಾಸ್ಟಿಕ್ ಸೋಡಾ ದ್ರಾವಣ ಹಾಕಿದ ನೀರಿನಲ್ಲಿ ಒಗೆದು ಒಣಗಿಸಬೇಕು. ಅನಂತರ ಈ ಬಟ್ಟೆಯನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯಲ್ಲಿ ಅದ್ದಿ ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು. ಮತ್ತೆ ಬಟ್ಟೆಯನ್ನು ತೆಳು ಗಂಜಿನೀರಿನಲ್ಲಿ ಅದ್ದಿ ತೆಗೆದು ಒಣಗಿಸಬೇಕು. ಒಣಗಿದ ಬಟ್ಟೆಯನ್ನು ಸುತ್ತಿಗೆಯ ಸಹಾಯದಿಂದ ಮೃದುವಾಗಿ ಬಡಿದು ಮೆದುಗೊಳಿಸಿ ಚೌಕಟ್ಟಿಗೆ ಹಾಕಬೇಕು. ಅನಂತರ ಚಿತ್ರರಚನೆಯ ಮತ್ತು ಬಣ್ಣ ಹಾಕುವ ಕೆಲಸ ಆರಂಭವಾಗುತ್ತದೆ. ಬಟ್ಟೆಯ ಮೇಲೆ ಸಾಮಾನ್ಯವಾಗಿ ಸಾಂಪ್ರದಾಯಿಕ ಶೈಲಿಯ ಚಿತ್ರಗಳನ್ನೇ ಬಿಡಿಸಲಾಗುತ್ತದೆ. (ಹೂ, ಚಿಟ್ಟೆ, ಹಕ್ಕಿ, ಹಣ್ಣು, ಶಂಖ ಇತ್ಯಾದಿ). ಯಾವಾಗಲೂ ಚಿತ್ರ ಬಿಡಿಸುವವರು ಹೆಂಗಸರೇ; ಬಣ್ಣ ಹಾಕುವವರು ಮಾತ್ರ ಗಂಡಸರು. ಜಾವಾದಲ್ಲಿ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಮಾತ್ರ ಬಾಟಿಕ್ ಕಲೆ ಸೀಮಿತವಾಗಿದೆ. ಪಾಶ್ಚಾತ್ಯದೇಶಗಳಲ್ಲಿ ಬಾಟಿಕ್ ಕಲೆಯನ್ನು ಉಣ್ಣೆಬಟ್ಟೆ, ವೆಲ್ವೆಟ್, ದಂತ, ಲೋಹ, ಮರ ಮುಂತಾದವುಗಳ ಮೇಲೂ ಬಿಡಿಸುವುದುಂಟು.

ಬಾಟಿಕ್ ಕಲೆಯ ವಸ್ತ್ರಗಳನ್ನು ಸಾಮಾನ್ಯವಾಗಿ ದಿಂಬಿನ ಚೀಲ, ಬಾಗಿಲು, ಕಿಟಕಿ, ಗೋಡೆಯ ಪರದೆಗಳು, ಮೇಜುವಸ್ತ್ರ ಹಾಗೂ ಉಡುಪು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇಂಡೊನೇಷ್ಯದ ಜನರು ಸದಾ ಬಾಟಿಕ್ ಕಲೆಯ ವಸ್ತ್ರಗಳನ್ನೇ ಉಪಯೋಗಿಸುವುದು ಒಂದು ವೈಶಿಷ್ಟ್ಯ. ಸರೋಂಗ್, ಸ್ಲೆಂಡಂಗ್, ಕೆಂಬನ್ ಮತ್ತು ಸರೋಂಗ್ ಕಪಲ ಅವರು ಬಳಸುವ ನಾಲ್ಕು ಪ್ರಧಾನ ಉಡುಪುಗಳು.

ಬಾಟಿಕ್ ಕಲೆ ಪ್ರಾಚೀನಕಾಲದಿಂದಲೂ ಭಾರತದಲ್ಲಿ ಬೆಳೆದು ಬಂದಿತ್ತಾದರೂ ಆಧುನಿಕ ಕಾಲದಲ್ಲಿ ಅದು ತನ್ನ ಪ್ರಾಶಸ್ತ್ಯ ಕಳೆದುಕೊಂಡಿತ್ತು. ಕವಿ ರವೀಂದ್ರನಾಥ ಟಾಗೂರರು ಶಾಂತಿನಿಕೇತನದಲ್ಲಿ ಈ ಕಲೆಯ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಡುವುದರ ಮೂಲಕ ಇದನ್ನು ಪುನರುಜ್ಜೀವನಗೊಳಿಸಿದರು. ಇಂದು ಭಾರತದಲ್ಲಿ ಈ ಕಲೆ ಉದ್ಯಮ ಸ್ವರೂಪವನ್ನು ಪಡೆದುಕೊಂಡಿದೆ. ಬಾಟಿಕ್ ವಿಧಾನವನ್ನು ಬಳಸಿ ಚಿತ್ರ ರಚಿಸುವ ಪದ್ಧತಿಯೂ ರೂಢಿಯಲ್ಲಿದ್ದು ಇದು ಬಾಟಿಕ್ ಚಿತ್ರಕಲೆ ಎಂದು ಪ್ರಸಿದ್ಧವಾಗಿದೆ. 		
(ಡಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ